ದೇವಲಾಪುರದ ನಂಜುಂಡ 
1841. ಮೈಸೂರ ಅರಸು ಮುಮ್ಮುಡಿ ಕೃಷ್ಣರಾಜನ ಆಸ್ಥಾನ ಕವಿ. ವೀರಶೈವ ಮತಸ್ಥ. ತಂದೆ ದೇವರಸ ತಾಯಿ ನಂಜಮಾಂಬೆ, ಇಷ್ಟದೇವತೆ ನಂಜನಗೂಡಿನ ನಂಜುಂಡೇಶ್ವರ. ಉಭಯ ಕವಿತೆಯೊಳು ಚತುರ ಎಂದು ತಾನೆ ಹೇಳಿಕೊಂಡಿದ್ದಾನೆ. ಈತ ಸುಮಾರು ಹದಿಮೂರು ಗ್ರಂಥಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಹೆಚ್ಚು ಗ್ರಂಥಗಳು ಮುಮ್ಮುಡಿ ಕೃಷ್ಣರಾಜನ ಸ್ತುತಿರೂಪವಾಗಿವೆ.

1. ಶ್ರೀ ಕೃಷ್ಣರಾಜೇಂದ್ರ ಭಕ್ತಿಸಾರಾಷ್ಟೋತ್ತರ ಶತಕ. ಇದರಲ್ಲಿ 108 ಭಾಮಿನಿ ಷಟ್ಪದಿಗಳಿವೆ. ಇದಕ್ಕೆ ಕೃಷ್ಣರಾಜ ಭಕ್ತಿಸಾರ ಎಂಬ ಹೆಸರೂ ಇದೆ. ಈ ಶತಕದ ಪ್ರತಿ ಪದ್ಯವೂ ಕೃಷ್ಣೇಂದ್ರ ರಕ್ಷಿಸು ನಮ್ಮನನವರತ ಎಂದು ಮುಗಿಯುತ್ತದೆ. 2. ಕೃಷ್ಣೇಂದ್ರಗೀತೆ. ಇದರಲ್ಲಿ ಭಾಮಿನಿ ಷಟ್ಪದಿಯ 32 ಪದ್ಯಗಳಿವೆ. 3. ಕೃಷ್ಣರಾಜ ಪಟ್ಟಾಭಿಷೇಕ ವರ್ಣನೆ ಸಾಂಗತ್ಯರೂಪದಲ್ಲಿದೆ. 4. ಕೃಷ್ಣರಾಜ ಭೋಗಾವಳಿ. ಇದರಲ್ಲಿ ಭಾಮಿನಿ ಷಟ್ಪದಿಯ 27 ಪದ್ಯಗಳಿವೆ. 5. ಕೃಷ್ಣರಾಜ ಶೃಂಗಾರ ಶತಕ. ಇದರಲ್ಲಿ ನೂರೊಂದು ಕಂದ ಪದ್ಯಗಳಿವೆ. ಕೃಷ್ಣರಾಜನ ರಸಿಕತೆಯನ್ನು ಕವಿ ಮನೋಜ್ಞವಾಗಿ ಚಿತ್ರಿಸಿದ್ದಾನೆ. 6. ಸೌಗಂಧಿಕಾ ಪರಿಣಯ. ಹದಿನಾಲ್ಕು ಆಶ್ವಾಸ, 726 ಪದ್ಯಗಳುಳ್ಳ ದೊಡ್ಡ ಕಾವ್ಯ ಸಾಂಗತ್ಯದಲ್ಲಿದೆ. ಇದು ಮುಮ್ಮುಡಿ ಕೃಷ್ಣರಾಜನ ಸೌಗಂಧಿಕಾಪರಿಣಯದ ಸಂಗ್ರಹವೆಂದೂ ಆತನ ಆe್ಞÁನುಸಾರ ಇದನ್ನು ಬರೆದುದಾಗಿಯೂ ಕವಿ ಹೇಳಿಕೊಂಡಿದ್ದಾನೆ. 7. ಶೈಲಜಾಧವಸ್ತೋತ್ರ. ಶಿವ ಸ್ತುತಿರೂಪದ ಈ ಗ್ರಂಥದಲ್ಲಿ 33 ವೃತ್ತಗಳಿವೆ. 8. ಶಂಕರಾಷ್ಟಕ, ಎಂಟು ವೃತ್ತಯಗಳಿಂದ ಕೂಡಿದ ಇದು ಶಿವ ಸ್ತುತಿಯಾಗಿದೆ. 9. ಲಿಂಗಸ್ತುತಿ, ಇದರಲ್ಲಿ ಭಾಮಿನಿ ಷಟ್ಪದಿಯ 27 ಪದ್ಯಗಳಿವೆ. 10. ಅಪರಾಧ ಸ್ತೋತ್ರ. ಇದರಲ್ಲಿ 127 ವಾರ್ಧಕ ಷಟ್ಪದಿಗಳಿವೆ. 11. ಸಮುದ್ರ ಮಥನದ ಕಥೆ, ಯಕ್ಷಗಾನ ರೂಪದಲ್ಲಿದೆ. 12. ಕೃಷ್ಣರಾಜೇಂದ್ರ ವೃತ್ತರತ್ನಾವಳಿ ಟೀಕೆ. 13. ತಿಬ್ಬಾಂಬಿಕಾ ಶತಕ.

ಈ ಕವಿಗೆ ಕನ್ನಡ ಸಂಸ್ಕøತ ಭಾಷೆಗಳೆರಡರಲ್ಲೂ ಪರಿಶ್ರಮವಿದ್ದಂತೆ ವ್ಯಕ್ತವಾಗುತ್ತದೆ. ಈತ ಕೆಲವು ಕೃತಿಗಳಲ್ಲಿ ಸ್ವಾಮಿನಿಷ್ಠೆಯನ್ನೂ ಮತ್ತೆ ಕೆಲವರಲ್ಲಿ ದೈವಭಕ್ತಿಯನ್ನೂ ವ್ಯಕ್ತಪಡಿಸಿದ್ದಾನೆ. ಅಲ್ಲದೆ ಕನ್ನಡದ ಎಲ್ಲ ಛಂದಸ್ಸಿನಲ್ಲೂ ಕೃತಿಗಳನ್ನು ರಚಿಸಬಲ್ಲನೆಂಬುದನ್ನು ತೋರಿಸಿದ್ದಾನೆ. 								 (ಎನ್.ಬಿ,)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ